ಮ್ಯಾಟ್ನಿ ಪ್ರೀತಿ- ಸ್ನೇಹಕ್ಕೆ ಬೆಲೆ ಕೊಡದ ಸ್ನೇಹಿತರು..--ರೇಟಿಂಗ್: 3/5 ***
Posted date: 06 Sat, Apr 2024 02:03:14 PM
ಹಾರರ್, ಕಾಮಿಡಿ ಕಥಾನಕ ಹೊಂದಿದ  ಮ್ಯಾಟ್ನಿ ಚಿತ್ರದ ಮೂಲಕ ಪ್ರೀತಿ, ಸ್ನೇಹ ಸಂಬಂಧಕ್ಕಿರುವ  ಮಹತ್ವವನ್ನು ನಿರ್ದೇಶಕ ಮನೋಹರ ಕಾಂಪಲ್ಲಿ ಅವರು  ಹೇಳಲು ಪ್ರಯತ್ನಿಸಿದ್ದಾರೆ.  ಪ್ರೀತಿಸಿದ ಹೃದಯಕ್ಕಾಗಿ, ಸ್ನೇಹಿತರಿಗಾಗಿ ಕಾದ  ಆತ್ಮವೊಂದಕ್ಕೆ ಸ್ವಾರ್ಥ ಮನುಷ್ಯನ ನಿಜರೂಪದ ದರ್ಶನವಾಗುತ್ತೆ. ಹಣ ಆಸ್ತಿಯ ಮುಂದೆ ಎಲ್ಲವೂ ಗೌಣವಾಗುತ್ತೆ ಅನ್ನೋದನ್ನು ಈ ಚಿತ್ರ ತೋರಿಸಿಕೊಡುತ್ತದೆ.      

ಚಿಕ್ಕವರಿದ್ದಾಗಿಂದ  ಒಟ್ಟಿಗೆ ಓದಿ ಬೆಳೆದ  ಅರುಣ(ಸತೀಶ್ ನೀನಾಸಂ) ಹಾಗೂ ಆತನ ಮೂವರು ಗೆಳೆಯರು ಭವಿಷ್ಯದಲ್ಲಿ ತಮ್ಮದೇ ಆದ  ಬದುಕು ಕಟ್ಟಿಕೊಳ್ಳುತ್ತಾರೆ. 
 
ಅವರಲ್ಲಿ  ಶ್ರೀಮಂತ ಕುಟುಂಬದಿಂದ ಬಂದ ನಾಯಕ ಅರುಣ, ತಾಯಿಯೊಂದಿಗೆ  ದೊಡ್ಡ ಮನೆಯಲ್ಲಿರುತ್ತಾನೆ. ಆ ಸಂದರ್ಭದಲ್ಲಿ ಅನಾಥಾಶ್ರಮದಲ್ಲಿ ಬೆಳೆದ ಯುವತಿ ಅಕ್ಷರಾ(ರಚಿತಾರಾಮ್) ಪರಿಚಯವಾಗಿ  ಆಕೆಯನ್ನು  ಅರುಣ್ ಮನದಲ್ಲೇ ಇಷ್ಟಪಡುತ್ತಾನೆ. ನಂತರ ತಾಯಿಯ ಅಕಾಲಿಕ ಅಗಲಿಕೆಯಿಂದ ಅರುಣ  ಒಂಟಿಯಾಗುತ್ತಾನೆ. ಇತ್ತ  ತನ್ನ ಕಾಲಮೇಲೆ ತಾನು ನಿಲ್ಲಬೇಕೆಂದುಕೊಂಡಿದ್ದ ಅಕ್ಷರಾ  ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ  ಹೋಗುವ ಪಡೆದುಕೊಳ್ಳುತ್ತಾಳೆ. ಆಕೆ ವಿದೇಶಕ್ಕೆ ಹೋಗೋದನ್ನು ಸಹಿಸದ ಅರುಣ್, ಬೇಡ ಎಂದಾಗ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಅಕ್ಷರಾ ಆತನ ಕೋರಿಕೆಯನ್ನು ಧಿಕ್ಕರಿಸಿ ಹೊರಡುತ್ತಾಳೆ.
 
ಮನಸಾರೆ ಇಷ್ಟಪಟ್ಟ ಹುಡುಗಿ ಬಿಟ್ಟು ಹೋದಾಗ ಅರುಣ್ ಮತ್ತಷ್ಟು ಕುಗ್ಗಿ ಹೋಗುತ್ತಾನೆ.  ಇದೇ ಸಂದರ್ಭದಲ್ಲಿ  ಆತನ ಮೂವರು ಗೆಳೆಯರು ಸ್ನೇಹಿತನನ್ನು ಕಂಡು ಮಾತಾಡಿಸಲು  ಆತನ ಮನೆಗೆ ಬರುತ್ತಾರೆ. ಜೀವದ ಗೆಳೆಯರನ್ನು ಕಂಡ ಅರುಣ, ತನ್ನ ನೋವನ್ನೆಲ್ಲ  ಮರೆತು ಅವರೊಂದಿಗೆ ಖುಷಿಯಿಂದ  ಬೆರೆತು ನಲಿದಾಡುತ್ತಾನೆ.  ಮುಂದೆ ಆ ಮನೆಯಲ್ಲಿ  ನಡೆಯುವ ಅನೇಕ ಅನಿರೀಕ್ಷಿತ  ಘಟನೆಗಳಿಂದಾಗಿ  ಆ ಸ್ನೇಹಿತರು ಒಂದಷ್ಟು ವಿಚಲಿತಗೊಳ್ಳುತ್ತಾರೆ.  ಆ ಮನೆಯಲ್ಲಿ  ದೆವ್ವ ಇದೆಯೆಂದು ಅನುಮಾನ ಬಂದು ಸ್ನೇಹಿತನ ಬಳಿಯೂ ಇದರ ಬಗ್ಗೆ ಪ್ರಸ್ತಾಪಿಸಿ ಮನೆಯನ್ನು ಮಾರಾಟ ಮಾಡಲು ಪ್ರೇರೇಪಿಸುತ್ತಾರೆ. ಆದರೆ ಅರುಣ ತನ್ನ ತಾಯಿಯೇ ದೆವ್ವವಾಗಿ  ಮನೆಯಲ್ಲಿ ಸಂಚರಿಸುತ್ತಿರಬಹುದೆಂದು ಅನುಮಾನ ಪಟ್ಟ ಗೆಳೆಯರ ಮೇಲೆ ಬೇಸರಗೊಳ್ಳುತ್ತಾನೆ. ಆ ಮನೆಯಲ್ಲಿ  ಈ ನಾಲ್ವರಲ್ಲದೆ  ಚಿತ್ರಾ(ಅದಿತಿ ಪ್ರಭುದೇವ್) ಎಂಬ ಮತ್ತೊಬ್ಬ ಯುವತಿಯೂ ಇರುವುದು ನಂತರ ತಿಳಿದುಬರುತ್ತದೆ. ಹಾಗಾದರೆ ಆ ಮನೆಯಲ್ಲಿ  ನಿಜಕ್ಕೂ ದೆವ್ವ ಇದೆಯಾ, ಹಾಗಾದರೆ ಅಷ್ಟೂ ಜನರಲ್ಲಿ ದೆವ್ವ ಯಾರು,? ಈ ಸ್ನೇಹಿತರಿಗೆ ಯಾಕೆ ಅದು ತೊಂದರೆ ಕೊಡುತ್ತಿಲ್ಲ ? ಅಕ್ಷರಾ, ಅರುಣ್ ಮತ್ತೆ ಸಂಧಿಸಿದರಾ ? ಅಷ್ಟಕ್ಕೂ ಆ ಚಿತ್ರಾ ಯಾರು ? ಈ ಎಲ್ಲ ಪ್ರಶ್ನೆಗಳಿಗೆ  ಉತ್ತರ ಸಿಗಬೇಕೆಂದರೆ ನೀವೊಮ್ಮೆ ಚಿತ್ರಮಂದಿರಕ್ಕೆ ಹೋಗಿ ಮ್ಯಾಟ್ನಿ ಷೋ ನೋಡಲೇಬೇಕು, 
 
ಪಾರ್ವತಿ ಎಸ್,ಗೌಡ  ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರುಣ್ ಪಾತ್ರದಲ್ಲಿ ಸತೀಶ್ ನೀನಾಸಂ ಉತ್ತಮ ಅಭಿನಯ  ನೀಡಿದ್ದಾರೆ.  ಮೊದಲಬಾರಿಗೆ ಸ್ವಲ್ಪ ನೆಗೆಟಿವ್ ಶೇಡ್ ಇರೋ ಪಾತ್ರವನ್ನು ರಚಿತಾರಾಮ್ ಅಷ್ಟೇ ಚೆನ್ನಾಗಿ ನಿಭಾಯಿಸಿದ್ದಾರೆ.  ಅದಿತಿ ಪ್ರಭುದೇವ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆಯಿಲ್ಲ.  ಸ್ನೇಹಿತರ ಪಾತ್ರಗಳಿಗೆ  ಶಿವರಾಜ್ ಕೆ.ಆರ್. ಪೇಟೆ, ನಾಗಭೂಷಣ್ ,  ಪೂರ್ಣಚಂದ್ರ ಮೈಸೂರು, ದಿಗಂತ್ ದಿವಾಕರ್ ಜೀವ ತುಂಬಿದ್ದಾರೆ.  ಮ್ಯಾಟ್ನಿ  ಚಿತ್ರ ವೀಕ್ಷಕರನ್ನು ನಗಿಸುತ್ತಲೇ ಒಂದಷ್ಟು  ಗೊಂದಲಗಳನ್ನು  ಹುಟ್ಟುಹಾಕುತ್ತದೆ, ಕಥೆಯಲ್ಲಿ  ಲಾಜಿಕ್ ಹುಡುಕದೆ ಎಂಟರ್‌ಟೈನ್‌ಮೆಂಟ್ ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ  ಮ್ಯಾಟ್ನಿ  ನಿಜಕ್ಕೂ  ಕಲರ್ ಫುಲ್ ಆಗೇ ಕಾಣಿಸುತ್ತದೆ,   ಸುತ್ತಿಬಳಸಿ ತಂದ ಕಥೆ ಗೊಂದಲ ಉಂಟುಮಾಡಿದರೂ ಅಂತಿಮವಾಗಿ ಪರಿಣಾಮಕಾರಿಯಾಗಿದೆ.  ಗೆಳೆತನ ಮತ್ತು ಪ್ರೀತಿಯ ಕಥೆಯನ್ನು ಜನರಿಗೆ ಅರ್ಥೈಸುವಲ್ಲಿ ಸಿನಿಮಾ ಸಫಲವಾಗಿದೆ. ನಾಯಕನ ಪ್ರಾಮಾಣಿಕ ಅಭಿನಯ,  ರಚಿತಾ ರಾಂ  ಮುದ್ದಾದ ನಗು ನೋಡುಗರನ್ನು ಸೆಳೆಯುತ್ತದೆ. ಈ ಚಿತ್ರದ  ಕ್ಯಾಮರಾ ಕೆಲಸಕ್ಕೆ ಪೂರ್ತಿ  ಮಾರ್ಕ್ ಕೊಡಲೇಬೇಕು. ಒಟ್ಟಾರೆ  ಈ ಸಿನಿಮಾ ಹಾರರ್ ಆದರೂ ವೀಕ್ಷಕರಿಗೆ ನಗುವಿನೌತಣ ಉಣಬಡಿಸಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed